ಸೌರವ್ ಗಂಗೂಲಿ
	1972-. ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವೀ ನಾಯಕ (2000 ದಿಂದ). ಇವರು ಕೊಲ್ಕತ್ತದಲ್ಲಿ 1972 ಜುಲೈ 8ರಂದು ಜನಿಸಿದರು. ತಂದೆ ಚಂಡೀದಾಸ, ತಾಯಿ ನಿರೂಪಾ. ಇವರ ತಾತ ಸಚ್ಚಿದಾನಂದ ಗಂಗೂಲಿ ಸ್ಥಳೀಯ ಮಟ್ಟದಲ್ಲಿ ಯಶಸ್ವಿ ಕ್ರಿಕೆಟ್ ಪಟು ಮತ್ತು ಕ್ರೀಡಾಪೋಷಕರಾಗಿದ್ದರು. ತಂದೆ ಕ್ರಿಕೆಟ್ ಆಟಗಾರರೂ ಪೋಷಕರೂ ಬಂಗಾಲ ಕ್ರಿಕೆಟ್ ಅಸೋಸಿಯೇಷನ್‍ನ ಕಾರ್ಯದರ್ಶಿ ಹಾಗೂ ಖಜಾಂಚಿಯೂ ಆಗಿದ್ದರು. ಚಿಕ್ಕಪ್ಪ ದೇಬಶಿಷ್ ಇವರಿಗೆ  ಪ್ರೋತ್ಸಾಹ ನೀಡಿದರು. ಅವರು ಬಂಗಾಲದ ರಣಜಿ ಟ್ರೋಫಿ ಆಟಗಾರರಾಗಿದ್ದರು. 

	ಬಾಲ್ಯದಲ್ಲಿ ಸೌರವ್‍ರ ಒಲವು ಫುಟ್‍ಬಾಲ್ ಆಡುವುದರತ್ತ ಹರಿದಿತ್ತು. 13ನೆಯ ವಯಸ್ಸಿನಲ್ಲಿ ಈ ಆಸಕ್ತಿ ಕ್ರಿಕೆಟ್‍ನತ್ತ ಹೊರಳಿತು. 14ನೆಯ ವಯಸ್ಸಿಗೆ ಚಿಕ್ಕಪ್ಪನಿಂದ ಎಸ್.ಜಿ. ಬ್ಯಾಟ್ ಉಡುಗೊರೆ ಪಡೆದರು. ಅದು ಇವರಿಗೆ ಅಮೂಲ್ಯವೂ ಅತ್ಯಂತ ಪ್ರೋತ್ಸಾಹದಾಯಕವೂ ಆಗಿತ್ತು. ಬಾಲ್ಯದಲ್ಲಿ ಇವರು ತುಂಬ ತುಂಟರಾಗಿದ್ದರು. ತಂದೆ ತಾಯಿಯರ ಶಿಸ್ತಿನ ನಡುವೆಯೇ ಶಾಲೆತಪ್ಪಿಸುತ್ತಿದ್ದರು. ದುಖಿರಾಮ್ ಕ್ರಿಕೆಟ್ ಕೋಚಿಂಗ್ ಸೆಂಟರ್‍ನಲ್ಲಿ ದೇಬು ಮಿತ್ರರಿಂದ ಕೋಚಿಂಗ್ ಪಡೆದಾಗ ಇವರಿಗೆ 15ವರ್ಷ ವಯಸ್ಸು. ಇವರು 15 ವರ್ಷದವರ ಒಳಗಿನ ಬಂಗಾಲದ ತಂಡಕ್ಕೆ ಆಯ್ಕೆಯಾದರು. ಮೊದಲ ಇನ್ನಿಂಗ್ಸ್‍ನಲ್ಲಿ 76 ಮತ್ತು ಎರಡನೆಯದರಲ್ಲಿ 101ರನ್ ಗಳಿಸಿದರು. 

	ಇಂಗ್ಲೆಂಡ್‍ನಲ್ಲಿ 19 ವರ್ಷದವರ ಒಳಗಿನ ತಂಡಕ್ಕೆ ಆಯ್ಕೆಯಾಗಿ ವಿಶ್ವಕಪ್‍ಗೆ ಆಡುವಾಗ ತನ್ನ ಆಯ್ಕೆಯನ್ನು ಯಾರಿಗೂ ತಿಳಿಯದಂತೆ ನೋಡಿಕೊಂಡಿದ್ದರು. ಅಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಾಗಲೇ ಇತರರಿಗೂ ಮನೆಯವರಿಗೂ ಇದು ಗೊತ್ತಾಯಿತು.

	1987ರಲ್ಲಿ ಉತ್ತರವಲಯ ತಂಡದ ವಿರುದ್ಧ ಪಾಟಿಯಾಲದಲ್ಲಿ 70ರನ್ ಗಳಿಸಿ ಪೂರ್ವವಲಯ ತಂಡದ ಯಶಸ್ಸಿಗೆ ಕಾರಣರಾದರು. ಸಂಜಯ ದಾಸ್‍ನೊಡನೆ ಈ ಮೊತ್ತ 160ಗಳಾಗಿತ್ತು. ವಿಜಯ ಹಜಾರೆ ಟ್ರೋಫಿ ಇವರಿಗೆ ದಕ್ಕಿತು. 

	ಸಚಿನ್ ತೆಂಡೂಲ್ಕರ್ ಹಾಗೂ ಅಜಯದಾಸ್‍ರೊಂದಿಗೆ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾದಾಗ ಸಚಿನ್ ಮೂರು ಶತಕ ಬಾರಿಸಿದ್ದರು. ಸೌರವ್ ಮತ್ತು ಅಜಯ್‍ದಾಸ್ ತಲಾ ಎರಡು ಶತಕ ಬಾರಿಸಿದ್ದರೂ ಸೌರವ್‍ರದೇ ಅತ್ಯುತ್ತಮ ಬ್ಯಾಟಿಂಗ್ ಸರಾಸರಿಯಾಗಿತ್ತು. 

	1991-92ರಲ್ಲಿ ಇವರು ಆಸ್ಟ್ರೇಲಿಯದ ವಿರುದ್ಧ ಆಡಲು ಆಯ್ಕೆಯಾದರು. 1993-94 ರಣಜಿ ಟ್ರೋಫಿಯಲ್ಲಿ 200ರನ್ ಮಾಡಿ ಔಟಾಗದೇ ಉಳಿದರು. ಅಂತೆಯೇ 1994-95ರ ರಣಜಿಯಲ್ಲೂ 200ರನ್ ಗಳಿಸಿ ಔಟಾಗದೇ ಉಳಿದ ಇವರು ಭಾರತ ತಂಡದಲ್ಲಿ ಭದ್ರ ಸ್ಥಾನ ಗಳಿಸಿದರು. ಆದರೆ ವೆಸ್ಟ್‍ಇಂಡೀಸ್ ವಿರುದ್ಧ 1992ರಲ್ಲಿ ಆಡಿದ ಚೊಚ್ಚಲ ಒಂದು ದಿನದ ಪಂದ್ಯದಲ್ಲಿ ಕೇವಲ 3 ರನ್ ಗಳಿಸಿದ್ದಕ್ಕಾಗಿ ಉಳಿದ ಪಂದ್ಯಗಳನ್ನಾಡುವ ಅವಕಾಶದಿಂದ ವಂಚಿತರಾದರು. ಇವರನ್ನು ಕೇವಲ ಸ್ಥಾನೀಯ ಪಂದ್ಯಗಳನ್ನಾಡಲು  ಉಳಿಸಿಕೊಳ್ಳಲಾಯಿತು. 

	ಅತಿಶೀಘ್ರ ಅವಧಿಯಲ್ಲಿ 8000 ರನ್ ಗಳಿಸಿದ್ದು ಇವರ ವೈಶಿಷ್ಟ್ಯ. ಸಚಿನ್ ತೆಂಡೂಲ್ಕರ್ ಹಾಗೂ ಅಜರುದ್ದೀನ್‍ರ ಅನಂತರ ಇವರಿಗೆ 3ನೆಯ ಸ್ಥಾನವೂ ಪ್ರಪಂಚದಲ್ಲಿ 9ನೆಯ ಸ್ಥಾನವೂ ಈ ಸಾಧನೆಯಿಂದ ಲಭ್ಯವಾಯಿತು. ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ (2004). 

	ಕ್ರೈಸ್ತ ಯುವತಿ ಡೋನಾಳನ್ನು ಪ್ರೇಮಿಸಿ ಮದುವೆಯಾದರು. ಅನಂತರ ಈ ಮದುವೆಗೆ ಸಾಮಾಜಿಕ ಒಪ್ಪಿಗೆ ದೊರೆಯಿತು. ಇವರ ಪತ್ನಿ ಖ್ಯಾತ ಒಡಿಸ್ಸಿ ನೃತ್ಯಪಟು; ಕೇಳುಚರಣ ಮಹಾಪಾತ್ರರ ಶಿಷ್ಯರಾಗಿ ಸಾಧನೆ ಮಾಡುತ್ತಿದ್ದಾರೆ.
		(ಡಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ